Tags » Kannada Kavana

ಕವಿತೆ ಮುದುಡಿದೆ

ಕವಿತೆ ಬರೆಯದ ಕೈಗಳ ಮೇಲೆ,
ಮನಸ್ಸು ಮುನಿಸುಕೊಂಡಿದೆ

ಅಳುವ ಅದೆಷ್ಟೋ ಕಂದಮ್ಮಗಳ
ನೋವು ನಿಲ್ಲುವವರೆಗೂ !!!

ಕವಿತೆ ಹೊರ ಬರುವುದಿಲ್ಲ ಎಂದು
ಮನಸ್ಸೊಳಗೆ ಮುದುಡಿ ಕುಳಿತಿದೆ,,,

ಹುಣ್ಣಿಮೆಯಲಿ, ಬೆಳದಿಂಗಳು
ಕಳೆದು ಹೋದಂತೆ
ಬಿಸಿ ಸೂರ್ಯ ಕಣ್ಣಿಗೆ ಗೋಚರಿಸಿದರೂ
ಬೆಳಕು ನೀಡದೆ ಕೋಪಗೊಂಡಂತೆ
ಕವಿತೆ ಕೋಪಗೊಂಡಿದೆ

ಬೆವರು ಹರಿಸಿ, ಅನ್ನ ಬೆಳೆದ
ರೈತ ದಿನವೂ ಉಪವಾಸ ಮಲಗುವಂತೆ
ಕವಿತೆ ಉಪವಾಸ ಮಲಗಿದೆ,

ಮೇಣದ ಬತ್ತಿಯ ಕಾಲಿಯಾದ ನೆರಳು
ಮತ್ತದರ, ಗಟ್ಟಿ ಹನಿಯಂತೆ
ಕವಿತೆ ಜಡಗಟ್ಟಿದೆ

ಅಯ್ಯೋ ಇದು ಮಳೆಯಲ್ಲ,,,,
ಹೆಣ್ಣೊಬ್ಬಳ ಆಕ್ರಂದನ ಮುಗಿಲ ತುಂಬಾ
ತುಂಬಿ,,, ಆಕೆಯ ಕಣ್ಣೀರು
ಮಳೆಯಂತೆ ಸುರಿಯುತ್ತಿದೆ,

ನೆನೆದ ಮನಗಳು ಮುದುಡಿದಂತೆ ;

ನನ್ನ ಕವಿತೆ ಮುದುಡಿ ಕುಳಿತಿದೆ.

– ನವೀನ್ ಜೀ ಕೇ

ಹಾಗೆ ಸುಮ್ಮನೆ

ವಾಗ್ವಾದ

ದೇಹದ ಬಾಣಲೆಯೊಳಗೆ ಬಿಸಿ ರಕ್ತ ಕುದಿಯುತಿರೆ,
ಬಂದ ಭಾವನೆಗಳನು ಬೇಯಿಸ ಬೇಡ ಎಂದರೆ ಹೇಗೆ ?
ಹಾಡು ಹಗಲೇ ಕಳ್ಳ ಗುಡುಗಿಗೆ ಹೆದರಿ, ಮನೆ ಸೇರಿದರೆ
ಮಳೆಯ ಮಧುರ ಮೌನದ ಸಿಂಚನವಾಗುವುದು ಹೇಗೆ?

ಮೆತ್ತಗೆ ಹೆಜ್ಜೆ ಇಟ್ಟು ಜಿಂಕೆಯ ಹಿಡಿದ ಮಾತ್ರಕ್ಕೆ
ಹುಲಿಯನು, ನರಿಯೆಂದು ಕರೆಯುವುದು ಹೇಗೆ ?
ಬದುಕಿನ ಬೆಂಕಿಯ ಕೆನ್ನಾಲಿಗೆಯ ಪಕ್ಕದಲಿ
ಕುಳಿತು, ಸುಡಬೇಡ ನನ್ನ, ಪೊರೆ ಎಂದರೆ ಹೇಗೆ ?

ದಿನ ನಡೆವ ಮಾಟದೊಳಗೆ, ಕೈ ಎತ್ತಿ, ಹೂ ಕಿತ್ತು,
ದೇಶವನು ಹರಾಜಿಗಿಟ್ಟು, ಮುಗುಳ್ನಕ್ಕರೆ ಹೇಗೆ ?
ಬೇಸಿಗೆಯ ಮಳೆಯಲ್ಲಿ ಭೂಮಿ ಪರಿಮಳಿಸಿದಂತೆ
ನೋವಿಲ್ಲದ ಸಾವಿಲ್ಲದ ಸ್ಥಳ ಬೇಕೆಂದರೆ ಹೇಗೆ ?

ದೈತ್ಯ ಮೂರ್ತಿಯ ಎದುರಲ್ಲಿ, ಸಾವಿರ ಮಂತ್ರ ಜಪಿಸಿ
ಮನವೆಲ್ಲವನು ಮೋಹದ ಅಬ್ದಿಯೊಳಗೆ ಅದ್ದಿಟ್ಟರೆ ಹೇಗೆ?
ಮೇರು ಪರ್ವತವನು, ದೂರದಿಂದಾ ಕಂಡು,
ಹತ್ತುವ ದಾವಂತದಲಿ, ದಾರಿ ಮರೆತರೆ ಹೇಗೆ ?

ಹಾಗೆ ಸುಮ್ಮನೆ

----ಹುಟ್ಟಿನಿಂದಾಚೆಗೆ, ಮತ್ತೆ ಸಾಯದಂತೆ----

ಹುಟ್ಟಿದ ದಿನದಂದು, ತಾನು ಹುಟ್ಟಿದ್ದು
ಯಾಕೆಂದು ಪ್ರಶ್ನೆ ಕಾಡಿದಾಗ
ಕಳವಳವಾಗಿತ್ತು,
ಹುಟ್ಟಿನ ಸತ್ಯ ತಿಳಿಯುವ ಸಾಹಸ ಬೇಕೆ ?
ಈ ಪರದಾಟದ ಪರಮಾನ್ನ ಬೇಕೇ ?

ದಿನವೂ ಅದೆಷ್ಟು ಜೀವಗಳು
ಹುಟ್ಟಿ ಹುಟ್ಟಿ ಮತ್ತೆ ಸಾಯುತ್ತವೆ,
ಹುಟ್ಟಿಸುವ ಜೀವಗಳಿಗೆ
ಹುಟ್ಟುವವರು ಯಾರೆಂದು ಗೊತ್ತೇ ?

ಸಾಯುವುದೇ ಖಚಿತವೆಂದಮೇಲೆ
ಹುಟ್ಟುವುದು ಯಾಕೆ, ಸಾಯಲಿಕ್ಕೆ ?
ಸಾಧಿಸಲಿಕ್ಕೆ !!!! ???????

ಇದ್ದ-ಬದ್ದ ಬುದ್ದಿಯನೆಲ್ಲ
ಜಗದ ಗಮನ ಸೆಳೆಯುವಲ್ಲಿ ಅಡವಿತ್ತು.
ಹುಟ್ಟಿದ ಜೀವಗಳಿಗೆ ಹೆಸರಿಟ್ಟು
ಕುಣಿದು, ದಣಿದು, ಅನ್ಯರ ಕಾಲೆಳೆದು,
ತಾನು ಏನಾದರೇನು ??
ಸಾಯಲೇ ಬೇಕಲ್ಲ, ಎಲ್ಲ ಬಿಟ್ಟು, ಎಲ್ಲ ಮರೆತು

ಸತ್ತಾಗಲು ಒಂದು ಬದುಕಿದೆ,
ಹಾಗಾದರೆ ಬದುಕಿಗೆ ಕೊನೆ ಇಲ್ಲವೇ ?
ಹುಟ್ಟಿಗೆ ಸಾವು ವಿರುದ್ದ “ಪದ” ಮಾತ್ರ ಏನು ??

ಓಡಬೇಕೆನಿಸುತ್ತಿದೆ ಈ ಹುಟ್ಟಿನಿಂದಾಚೆಗೆ,
ಮತ್ತದರ ಸಾವಿನಿಂದಾಚೆಗೆ,
ಸಾಗರವ ದಾಟಿದರು ಭೂಮಿ ಗುಂಡಗೆ ಅಂತೆ,,,
ಹೋಗುವುದು ಎಲ್ಲಿಗೆ ?

ಧರ್ಮದ ಹೆಸರಿನ ಮರ್ಮ ಮತ್ತು ಕರ್ಮ,
ಗಡಿಯ ಬೇಲಿ, ಗುಡಿ, ಶಿಲುಬೆ,
ಬಟ್ಟೆಯೊಳಗಿನ ವೇಷ, ಭಾಷೆ,
ಎಲ್ಲವನು ಬಿಟ್ಟು, ಕೊನೆ ಮೊದಲಿಲ್ಲದೆಡೆಗೆ,,,

ಹೋಗಬೇಕು ನನ್ನೊಳಗೆ,
ಮೌನದ ನಿರ್ವಾತಕ್ಕೆ,
ಮತ್ತೆ ಹುಟ್ಟದ, ಇನ್ನೆಂದೂ ಸಾಯದ, ನಿರ್ವಾಣಕ್ಕೆ,

ಹಾಗೆ ಸುಮ್ಮನೆ

ಅರ್ಥವಿಲ್ಲದ ಸಾಲುಗಳು,,,

ಉದ್ದ ಮಣ್ಣಿನ ರಸ್ತೆಯಲಿ ಸಾಗುವಾಗ
ಅಕ್ಕ ಪಕ್ಕದ ಮುಳ್ಳಿಗೆ ಹೆದರಿದರೆ ?
ದಾರಿ ಸಾಗುವುದೇ,
—————————————–
ಸವೆದ ಚಪ್ಪಲಿಯ ಗುರುತು ಹೇಳಬೇಕು
ಎಲುಬಿರದ ನಾಲಿಗೆಯಲ್ಲ,
ತಾನೇನು ಮಾಡಿದ್ದೇನೆಂದು.
—————————————–
ಹೊಟ್ಟೆ ತುಂಬಿದ ಮೇಲೆ, ಜೀವಂತ
ಜಿಂಕೆಯೂ ಹುಲಿಗೆ ಸ್ನೇಹಿತನೇ,,,
ಅತಿಯಾಸೆ ಹುಲಿಗಿಲ್ಲ
——————————————
ಅತೀ ಉಗ್ರ ಬೆಂಕಿಯೂ ತಣ್ಣಗಾಗುವುದು
ನೀರನು ಹರಿಬಿಟ್ಟ ಮೇಲೆ
ಕ್ರೋದ ಕೊಂಚವೂ ಉಳಿಯದಂತೆ
—————————————–
ಅತೀ ಸಿಹಿ ಹಣ್ಣಿಗೆ, ಕಲ್ಲುಗಳು ಹೆಚ್ಚು
ಕಿತ್ತು ತಿನ್ನುವ ಕಣ್ಣುಗಳೂ ಹೆಚ್ಚು
ಹಾಗೆಂದು ಹಣ್ಣು ಕಹಿಯಾಗುವುದೇ ?
—————————————–
ಮಧ್ಯ ಕಾಡಿನ ಮರ ಹಸಿರಾಗಿರುವುದಿಲ್ಲವೇ?
ನೀರು-ಬೇಲಿ ಹಾಕುವವನ ಹಂಗಿಲ್ಲದೆ!!
ಬೇಕಿರುವುದು ಸ್ವಾತಂತ್ರ್ಯ,,,, ಬೇಲಿಯಲ್ಲ,
——————————————-
ಗಿಡವ ಕಂಡು, ಚಿಕ್ಕದೆಂದು ಮರ ನಗುವುದೇ?
ಸಾಸಿವೆ ಗಾತ್ರದಲಿ ಬೀಜದಲಿ, ಮರ ಹೇಗೆ ಅಡಗಿತ್ತು
ಆಕರಕ್ಕೂ, ಒಳ ಶಕ್ತಿಗೂ ಸಂಬಂದವಿಲ್ಲ .

ಹಾಗೆ ಸುಮ್ಮನೆ